ನಗರೀಕರಣ -
	ಒಂದು ದೇಶದ ಜನರನ್ನು ಗ್ರಾಮೀಣ, ನಗರೀಯ ಎಂದು ವರ್ಗೀಕರಿಸಬಹುದು. ಒಂದು ದೇಶದಲ್ಲಿ ಗ್ರಾಮೀಣ ಜನಸಂಖ್ಯೆಗೂ ನಗರೀಯ ಜನಸಂಖ್ಯೆಗೂ ಇರುವ ಅನುಪಾತ ಅಲ್ಲಿಯ ಆರ್ಥಿಕ, ಸಾಮಾಜಿಕ ಹಾಗೂ ಜನವಲಸೆಯ ಸ್ವರೂಪಗಳಿಗೆ ಅನುಗುಣವಾಗಿರುತ್ತದೆ. ನಗರ ಪ್ರದೇಶದ ಸಾಪೇಕ್ಷ ಬೆಳವಣಿಗೆಯ ಪ್ರಕ್ರಿಯೆಯೇ ನಗರೀಕರಣ. ನಗರ ಪ್ರದೇಶದಲ್ಲಿ ವಾಸಿಸುವ ಜನಸಂಖ್ಯೆಯಿಂದ ನಗರೀಕರಣದ ಪ್ರಮಾಣವನ್ನು ಅರಿಯಬಹುದು. ನಗರೀಯ ಕೇಂದ್ರಗಳು ಆರ್ಥಿಕ ಪ್ರಗತಿಯ ವೇಗವರ್ಧನೆಯ ಸಾಧನಗಳಾಗಿರುವುದುಂಟು. ಆದ್ದರಿಂದ ಅವುಗಳಿಂದ ಕೆಲವು ಅನುಕೂಲಗಳುಂಟು. ಆದರೆ ಅವುಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕøತಿಕವಾಗಿ ಕೆಲವು ಸಮಸ್ಯೆಗಳೂ ಉದ್ಭವಿಸುತ್ತವೆ. ಅನುಕೂಲಗಳನ್ನು ಬಳಸಿಕೊಳ್ಳುವ ಮತ್ತು ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ಒಂದು ದೇಶದ ನಗರೀಕರಣದ ಅಧ್ಯಯನ ಅಗತ್ಯವೆನಿಸುತ್ತದೆ. ಜನಗಣತಿಯಲ್ಲಿ ನಗರೀಕರಣಕ್ಕೆ ಸಂಬಂಧಿಸಿದ ವಿವರಗಳನ್ನೂ ಸಾಮಾನ್ಯವಾಗಿ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ದೇಶದ ಜನಸಂಖ್ಯೆಯನ್ನೂ ಸಾಮಾನ್ಯವಾಗಿ ನಗರೀಯ ಹಾಗೂ ಗ್ರಾಮೀಣ ಎಂದು ವರ್ಗೀಕರಿಸುವುದು ಸಾಮಾನ್ಯವಾದರೂ ಈ ವಿಚಾರದಲ್ಲಿ ಎಲ್ಲ ದೇಶಗಳೂ ಒಂದೇ ಮಾನದಂಡವನ್ನು ಇಟ್ಟುಕೊಂಡಿರುವುದಿಲ್ಲ. ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಸ್ವೀಡನ್ನಿನಲ್ಲಿ 200 ಜನರಿರುವ ವಸತಿ ಪ್ರದೇಶವನ್ನು ನಗರೀಯವೆಂದು ಹೇಳಲಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ 500, ಕೆನಡದಲ್ಲಿ 1,000, ಪೂರ್ವ ಜರ್ಮನಿಯಲ್ಲಿ 2,000, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 2,500, ಜಾರ್ಡನಿನಲ್ಲಿ 10,000 ಜನರಿರುವ ಪ್ರದೇಶಗಳನ್ನು ನಗರೀಯ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಒಂದು ಪ್ರದೇಶವನ್ನು ನಗರೀಯವೆನ್ನಬೇಕಾದರೆ ಅಲ್ಲಿ ಕನಿಷ್ಠ 5,000 ಜನಸಂಖ್ಯೆ ಇರಬೇಕು; ಅಲ್ಲಿಯ ಪುರುಷ ದುಡಿಮೆಗಾರರಲ್ಲಿ ಕನಿಷ್ಠ ಮುಕ್ಕಾಲು ಪಾಲು ಜನ ಕೃಷೀತರ ಕಾರ್ಯ ನಿರತರಾಗಿರಬೇಕು; ಪ್ರತಿ ಚ.ಕಿಮೀ.ಗೆ ಕನಿಷ್ಠ 400ರಂತೆ (ಚ.ಮೈ.ಗೆ 1,000)ಜನಸಾಂದ್ರತೆ ಇರಬೇಕು. ಪೌರಸಭಾ, ಕಾರ್ಪೊರೇಷನ್ ಅಥವಾ ದಂಡು ಇರುವ, ಇಲ್ಲವೇ ನಗರಪ್ರದೇಶವೆಂದು ಅಧಿಸೂಚಿತವಾಗಿರುವ ಎಲ್ಲ ಸ್ಥಳಗಳೂ ನಗರೀಯ ಪ್ರದೇಶಗಳೆನಿಸಿಕೊಳ್ಳುತ್ತವೆ.

	ನಗರೀಕರಣದ ವ್ಯಾಖ್ಯೆಯ ವ್ಯತ್ಯಾಸದ ಕಾರಣದಿಂದ ಪ್ರಪಂಚದ ಬೇರೆ ಬೇರೆ ಖಂಡಪ್ರದೇಶಗಳಲ್ಲಿ ನಗರೀಕರಣ ಯಾವ ಪ್ರಮಾಣದಲ್ಲಿ ಉಂಟಾಗಿದೆ ಎಂಬುದನ್ನು ಹೇಳುವುದು ಕಷ್ಟ. ಆದರೂ ಕೆಲವು ತಜ್ಞರು ಈ ವ್ಯತ್ಯಾಸಗಳನ್ನು ಗಣಿಸದೆ, 20,000ಕ್ಕೂ 1,00,000ಕ್ಕೂ ಮೀರಿದ ಜನಸಂಖ್ಯೆಗಳುಳ್ಳ ಸ್ಥಳಗಳನ್ನೂ ಗಣನೆಗೆ ತೆಗೆದುಕೊಂಡು 1800-1960ರಲ್ಲಿ ಆಗಿರುವ ನಗರೀಕರಣವನ್ನು ಗುರುತಿಸಿದ್ದಾರೆ.

ಕೋಷ್ಟಕ 1 ಪ್ರಪಂಚದ ವಿವಿಧ ಖಂಡಗಳಲ್ಲಿ ನಗರೀಕರಣ
(1800-1960)
(ಒಟ್ಟು ಜನಸಂಖ್ಯೆಯ ಶೇಕಡ)

1800
1850
1900
1950
1960

1

2
20000 ಮತ್ತು ಅದಕ್ಕಿಂತ ಹೆಚ್ಚಿನ
 ಜನಸಂಖ್ಯೆ ಇರುವ ವಸತಿ
ಪ್ರದೇಶಗಳನ್ನು ಗಮನಿಸಿ
ಒಂದು ಲಕ್ಷ ಮತ್ತು ಅದಕ್ಕಿಂತ
ಹೆಚ್ಚಿನ ಜನಸಂಖ್ಯೆ ಇರುವ ವಸತಿ
ಪ್ರದೇಶಗಳನ್ನು ಗಮನಿಸಿ
 (ಎ) ಪ್ರಪಂಚದ ಸರಾಸರಿ:
 ವಿವಿಧ ಖಂಡಗಳ ಸರಾಸರಿ
ಏಷ್ಯ
ಆಫ್ರಿಕ
ಅಮೆರಿಕ
ಯೂರೋಪ್
ಓಷಿಯಾನಿಯಾ

2.4

1.7

1.6
0.3
0.4
2.9
--

4.3

2.3

1.7
0.2
3.0
4.9
--

9.2

5.5

2.1
1.1
12.8
11.9
21.7

20.9

13.1

7.5
5.2
22.6
19.9
39.2

27.1

19.9

12.3
8.1
42.0
29.6
43.3

ಈ ಅಂಕಿಗಳಿಂದ ವ್ಯಕ್ತವಾಗುವ ಅಂಶಗಳು ಇವು: 1. ನಗರೀಕರಣ ಪ್ರಪಂಚಾದ್ಯಂತ ಆಗುತ್ತಿದೆ. 2. ಏಷ್ಯ ಮತ್ತು ಆಫ್ರಿಕಗಳಂಥ ಹಿಂದುಳಿದ ಪ್ರದೇಶಗಳಿಗಿಂತ ಅಮೆರಿಕ, ಯೂರೋಪ್, ಓಷಿಯಾನಿಯ ಈ ಪ್ರದೇಶಗಳಲ್ಲಿ ನಗರೀಕರಣ ಹೆಚ್ಚಿನ ವೇಗದಲ್ಲಿ ಸಂಭವಿಸುತ್ತಿದೆ. ಮುಂದುವರಿದ ಪ್ರದೇಶಗಳಲ್ಲಿ ತೀವ್ರಗತಿಯಲ್ಲಿ ನಗರೀಕರಣವಾಗುತ್ತಿರಲು ಕಾರಣ ಅಲ್ಲಿಯ ಕೈಗಾರಿಕಾಭಿವೃದ್ಧಿ ಮತ್ತು ಅದರಿಂದ ಜನಶಕ್ತಿಗೆ ಅಲ್ಲಿ ತೀವ್ರವಾಗಿ ಏರುತ್ತಿರುವ ಬೇಡಿಕೆ.

	ನಗರೀಕರಣಕ್ಕೆ ಕಾರಣವಾದ ಅಂಶಗಳು ಸಾಮಾನ್ಯವಾಗಿ ಎರಡು: 1. ಜನಸಂಖ್ಯೆಯ ಸ್ವಾಭಾವಿಕ ಬೆಳವಣಿಗೆಯ ಫಲವಾದ ಏರಿಕೆ. 2. ಗ್ರಾಮಪ್ರದೇಶಗಳಿಂದ ಪಟ್ಟಣಗಳಿಗೆ ಜನರ ವಲಸೆ. ಪಟ್ಟಣಪ್ರದೇಶಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಆಹಾರ ಗುಣಮಟ್ಟ ಉತ್ತಮವಾಗಿರುವುದರಿಂದ ಗ್ರಾಮಪ್ರದೇಶಗಳಲ್ಲಿರುವುದಕ್ಕಿಂತ ನಗರಪ್ರದೇಶಗಳಲ್ಲಿ ಮರಣದರ ಕಡಿಮೆಯಾಗಿರುತ್ತದೆ. ಆದ್ದರಿಂದ ಹೆಚ್ಚಿನ ದರದಲ್ಲಿ ಜನಸಂಖ್ಯೆಯ ಏರಿಕೆ ಆಗುವ ಸಾಧ್ಯತೆ ಇರುತ್ತದೆ. ಎರಡನೆಯದಾಗಿ, ಗ್ರಾಮ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಆದ್ದರಿಂದ ಅಲ್ಲಿಯ ಜನರು ಉದ್ಯೋಗಾಕಾಂಕ್ಷೆಯಿಂದ ಪಟ್ಟಣಗಳಿಗೆ ಹೋಗುತ್ತಾರೆ. ಪಟ್ಟಣಗಳಲ್ಲಿಯ ಹೆಚ್ಚಿನ ಉದ್ಯೋಗಾವಕಾಶಗಳು, ಮನೋರಂಜನೆ, ಆರೋಗ್ಯ, ನೈರ್ಮಲ್ಯ, ಶಿಕ್ಷಣಸೌಲಭ್ಯ ಮೊದಲಾದ ಅನುಕೂಲಗಳು ಗ್ರಾಮವಾಸಿಗಳನ್ನು ಅವುಗಳತ್ತ ಸೆಳೆಯುತ್ತವೆ. ಇದರಿಂದ ನಗರೀಕರಣದ ವೇಗ ಹೆಚ್ಚುತ್ತದೆ.

  ಮೇಲೆ ಹೇಳಿದ ಎರಡೂ ಕಾರಣಗಳಿಂದಾಗಿ ಭಾರತದಲ್ಲಿ ನಗರೀಕರಣ ಪ್ರಕ್ರಿಯೆ ವೇಗದಲ್ಲಿ ಸಾಗುತ್ತಿದೆ. ಕೋಷ್ಟಕ 2ರಲ್ಲಿ ತೋರಿಸಿರುವಂತೆ 1901-1971ರಲ್ಲಿ ನಗರೀಕರಣ ದ್ವಿಗುಣಗೊಂಡಿರುವುದನ್ನು ಗಮನಿಸಬಹುದು. ಹಾಗೆಯೇ ಕರ್ನಾಟಕದಲ್ಲಿಯೂ ನಗರೀಕರಣ ಇದೇ ಅವಧಿಯಲ್ಲಿ ದ್ವಿಗುಣಗೊಂಡಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ನಗರೀಯ ಜನಸಂಖ್ಯೆಯ ಪ್ರಮಾಣಕ್ಕಿಂತ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಅದರ ಪ್ರಮಾಣ ಅಧಿಕವಾಗಿರುವುದನ್ನು ಕಾಣಬಹುದು.
ಕೋಷ್ಟಕ 2 ಒಟ್ಟು ಜನಸಂಖ್ಯೆಯಲ್ಲಿ ನಗರೀಯ ಜನಸಂಖ್ಯಾ ಪ್ರಮಾಣ
(ಭಾರತ ಹಾಗೂ ಕರ್ನಾಟಕದಲ್ಲಿ)

    ವರ್ಷ
ಒಟ್ಟು ಜನಸಂಖ್ಯೆಯ ಶೇಕಡ
    ಭಾರತ

   ಕರ್ನಾಟಕ

1901
1911
1921
1931
1941
1951
1961
1971
10.84
10.29
11.18
11.99
13.86
17.29
17.97
19.91
12.57
11.53
13.76
15.30
16.94
22.95
22.33
24.31

	ಪ್ರಪಂಚದ ಉಳಿದ ಪ್ರದೇಶಗಳಂತೆಯೇ ಭಾರತದಲ್ಲೂ ದೊಡ್ಡ ನಗರಗಳ ಬೆಳವಣಿಗೆಯಾಗುತ್ತಿದೆ. 1901ರಲ್ಲಿ 1,00,000ಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ನಗರಗಳ ಸಂಖ್ಯೆ 25 ಮಾತ್ರವಿತ್ತು; ಆಗ ಅಂಥ ನಗರಗಳ ಸಂಖ್ಯೆ 151. ನಗರ ಪ್ರದೇಶದ ಒಟ್ಟು ಜನಸಂಖ್ಯೆಯ ಮೂರನೆಯ ಎರಡು ಪಾಲು ಜನ ಇಂಥ ನಗರಗಳಲ್ಲಿಯೇ ವಾಸಿಸುತ್ತಾರೆ. ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಉಳ್ಳ ನಗರಗಳ ಸಂಖ್ಯೆ 1911ರಲ್ಲಿ 2 ಮಾತ್ರವಿತ್ತು; ಈಗ ಅದು 8ಕ್ಕೆ ಏರಿದೆ. ಅವುಗಳ ಪೈಕಿ ಮುಂಬಯಿ, ದೆಹಲಿ, ಬೆಂಗಳೂರು ಮತ್ತು ಅಹಮದಾಬಾದ್ ಅತಿ ಹೆಚ್ಚಿನ ದರದಲ್ಲಿ ಬೆಳೆಯುತ್ತಿದೆ (ಉಳಿದ ನಾಲ್ಕು ದೊಡ್ಡ ನಗರಗಳು ಕಲ್ಕತ್ತ, ಮದ್ರಾಸ್, ಹೈದರಾಬಾದ್ ಮತ್ತು ಕಾನ್ಪುರ).

	ಆರ್ಥಿಕ ಬೆಳವಣಿಗೆ ಮತ್ತು ಔದ್ಯೋಗಿಕ ರಚನೆಯ ಬದಲಾವಣೆಯನ್ನು ನಗರೀಕರಣ ಸೂಚಿಸುತ್ತದೆ. ಆದರೆ ನಗರಗಳ ಅತಿಯಾದ ಬೆಳವಣಿಗೆಯಿಂದ ಕೆಲವು ಸಮಸ್ಯೆಗಳು ಉದ್ಭವಿಸುತ್ತದೆ. ತೀವ್ರಗತಿಯ ನಗರ ಬೆಳವಣಿಗೆಯಿಂದ ವಿದ್ಯಾಭ್ಯಾಸ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್ತು, ಸಾರಿಗೆ-ಸಂಪರ್ಕ ಮುಂತಾದ ಅವಶ್ಯಕ ಸೇವೆಗಳ ಮೇಲೆ ಒತ್ತಡ ಉಂಟಾಗಿ ಸರ್ಕಾರ ಮತ್ತು ಪೌರಸಭೆಗಳಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಯೋಜಿತವಲ್ಲದ ನಗರಗಳ ಬೆಳವಣಿಗೆ ಕೊಳೆಗೇರಿಗಳ ಅವಕಾಶ ಉಂಟು ಮಾಡುವುದಲ್ಲದೆ ಕಳ್ಳತನ, ದರೋಡೆ, ವೇಶ್ಯಾಗಾರಿಕೆ ಮುಂತಾದ ಸಾಮಾಜಿಕ ಬೇನೆಗಳಿಗೆ ಎಡೆಮಾಡಿಕೊಡುತ್ತದೆ. ಆದ್ದರಿಂದ ನಗರ ಬೆಳವಣಿಗೆಯನ್ನು ಯೋಜಿತ ರೀತಿಯಲ್ಲಿ ಕೊಂಡೊಯ್ಯುವ ದೃಷ್ಟಿಯಿಂದಲೂ ಮೇಲಿನ ಸಮಸ್ಯೆಗಳ ಪ್ರಖರತೆಯನ್ನು ಕಡಿಮೆಮಾಡುವ ದೃಷ್ಟಿಯಿಂದಲೂ ನಗರಾಡಳಿತ ಸಂಸ್ಥೆಗಳು ನಗರ ಯೋಜನೆಗಳನ್ನು ತಯಾರಿಸಿ ಅನುಷ್ಠಾನಕ್ಕೆ ತರುವುದುಂಟು.									(ಎ.ಬಿ.ಎ.; ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ